Friday, June 17, 2011

ಅಂತ್ಯರಂಗ


ಯಾತಕೆ ಹೀಗೆ ಯಾತನೆಯಾಗಿ

ಕಾಡುವೆ ಹೇಳು ನನ್ನನ್ನು

ಗೋರಿಯ ಭೂತವ ಕೆದಕುವೆಯೇಕೆ

ನೆನಪಿಸಿ ನೆನಪಿಸಿ ನಿನ್ನೆಯನು...

ಶೂನ್ಯದ ಕಡೆಗೆ ನೆಟ್ಟರೂ ದೃಷ್ಟಿ

ತಟ್ಟನೆ ಹೊಳೆವೆ ಮಿಂಚಂತೆ

ತಣ್ಣೀರಿನ ಕೊಳದಿ ಮುಳುಗಿದರೂನು

ಸುಡುವೆ ಒಡಲನು ಚಿತೆಯಂತೆ...

ಮಿಂಚಿದರೇನು ಬಾನಿನ ತುಂಬಾ

ಬೆಳಕಿನ ಸಾವಿರ ಚುಕ್ಕೆಗಳು

ತಿಂಗಳ ಚಂದ್ರ ಕಾಣಿಸದಿರಲು

ಬಾಳನು ತುಂಬಿದೆ ಕಾರಿರುಳು...

ಅಂಕೆಗೆ ನಿಲುಕದು, ಎನನೂ ಬಯಸದು

ಬಾಳಲಿ ತುಂಬಿದೆ ಬರಿ ನೋವು

ಬಂಧನ ಬಿಡಿಸಲು,ಬಿಡುಗಡೆ ತೋರಲು

ಬರಲಿ ಇಂದೇ ಆ ಸಾವು..

ನನಗೆಂದೇ ಇರಲಿ ಆ ಸಾವು...

Thursday, April 17, 2008

ಸ್ತ್ರಿ ಸಬಲೀಕರಣ

ನನಗೆ ಮೊದಲಿನಿಂದಲೂ ಅರ್ಥವಾಗದ ವಿಷಯವೆಂದರೆ ಹೆಣ್ಣು ಯಾ ಸ್ತ್ರಿಯನ್ನು ಸಾರ್ವತ್ರಿಕವಾಗಿ 'ಅಬಲೆ' ಎಂದು ಕರೆದಿರುವುದು. ಇಂದು ಜಾಗತೀಕರಣದ ಮಡಿಲಲ್ಲಿ ಲಲ್ಲೆಗರೆಯುತ್ತಿರುವ ಜಗತ್ತಿನಲ್ಲಿ 'ಹೆಣ್ಣು ಅಬಲೆ' ಎಂಬ ಪದ ಅರ್ಥ ಕಳೆದು ಕೊಂಡಿರಬಹುದು ಆದರೆ ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಇನ್ನೂ ಕೂಡ 'ಹೆಣ್ಣು ಅಬಲೆ' ಎಂಬ ಮನೋಭಾವ ಯಾ ಭ್ರಾಂತು ಹೋಗಿಲ್ಲ ಎಂಬುದಕ್ಕೆ ಸ್ತ್ರಿ ಶಕ್ತಿ,ಸ್ತ್ರಿ ಜಾಗ್ರತಿ,ಮಹಿಳಾ ಮೀಸಲಾತಿ ಇತ್ಯಾದಿ ಇತ್ಯಾದಿ ಹತ್ತು ಹಲವಾರು ಸ್ತ್ರಿ ಸಬಲೀಕರಣದ ಆಂದೋಲನಗಳು ನಡೆಯುತ್ತಿರುವುದೇ ಸಾಕ್ಷಿ. ಆದರೆ ಸಮಾಜವನ್ನು ಹತ್ತಿರದಿಂದ ಅವಲೋಕಿಸುವ ಹಾಗೂ ಸತ್ಯಾನ್ವೇಷಿಯಾದ ನಾನು 'ಹೆಣ್ಣು ಅಬಲೆ' ಎಂಬುದು ಎಷ್ಟು ಸರಿ ಎಂಬುದನ್ನು ಕಂಡು ಹಿಡಿಯಲೇ ಬೇಕೆಂದು ಸತ್ಯ ಸಂಶೋಧನೆಯೊಂದನ್ನು ಕೈಗೊಂಡು ಹೆಣ್ಣು ಯಾವತ್ತೂ ಅಬಲೆಯಾಗಿರಲಿಲ್ಲ, ಇಂದೂ ಅಬಲೆಯಾಗಿಲ್ಲ, ಮತ್ತೆ ಮುಂದೆಂದೂ ಅಬಲೆಯಾಗಲಾರಳು ಎಂಬುದನ್ನು ಕಂಡು ಹಿಡಿದಿದ್ದೇನೆ. ನನ್ನ ಸಂಶೋಧನೆಯ ಕೆಲವೊಂದು ಮುಖ್ಯ ತರ್ಕಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅಂತಿಮವಾಗಿ ನಿರ್ಣಯ ಓದುಗರಿಗೆ ಬಿಟ್ಟದ್ದು.

1. ಪ್ರಥಮವಾಗಿ 'ಅಬಲೆ' ಪದದ ವ್ಯಾಕರಣವನ್ನು ಒಂದಿಷ್ಟು ಕೂಲಂಕುಷವಾಗಿ ಅವಲೋಕಿಸೋಣ. 'ಅಬಲೆ' ಪದವನ್ನು ಬಿಡಿಸಿದರೆ ಅ-ಬಲೆ ಅರ್ಥಾತ್ 'ಬಲೆ ಇಲ್ಲದಿರುವುದು' ಎಂದಾಗುತ್ತದೆ.( ಇದಕ್ಕೆ ದೃಷ್ಟ-ಅದೃಷ್ಟ, ತೃಪ್ತಿ-ಅತೃಪ್ತಿ,ಗೋಚರ-ಅಗೋಚರ ಮುಂತಾದ ವಿರುದ್ದಾರ್ಥ ಪದಗಳನ್ನು ಆಧಾರವಾಗಿ ಪಡೆಯಲಾಗಿದೆ ) ಒಟ್ಟರ್ಥದಲ್ಲಿ ಹೇಳುವುದಾದರೆ 'ಹೆಣ್ಣು ಅಬಲೆ' ಎಂದರೆ 'ಹೆಣ್ಣು ಬಲೆ ಇಲ್ಲದವಳು' ಎಂದಾಗುತ್ತದೆ. ಆದರೆ ವಾಸ್ತವದಿಂದ ನೋಡಿದರೆ ಇದು ( ಹೆಣ್ಣು ಬಲೆ ಇಲ್ಲದವಳು ) ನೂರಕ್ಕೆ ನೂರರಷ್ಟು ಶುದ್ಧ ಸುಳ್ಳು. ಯಾಕೆಂದರೆ ಹೆಣ್ಣು ,ಬರಿ ಕಣ್ಣಿಗೆ ಅಗೋಚರವಾದ ಮತ್ತು ಯಾವ ಗಂಡು ಪ್ರಾಣಿಯೂ ತಪ್ಪಿಸಿಕೊಳ್ಳಲಾಗದ ಒಂದು ವಿಶಿಷ್ಟ ಬಲೆಯ ಸಮೂಹವನ್ನು ಹೊಂದಿರುವುದಷ್ಟೇ ಅಲ್ಲ, ಆ ಬಲೆಯನ್ನು ಬೀಸಿ ಗಂಡು ಪ್ರಾಣಿಗಳನ್ನು ಕೆಡಹುವುದರಲ್ಲೂ ಚತುರಳು. ಹೆಣ್ಣಲ್ಲಷ್ಟೇ ಕಾಣಸಿಗುವ ಈ ವಿಶಿಷ್ಟ ಮೋಹಕ ಬಲೆಯ ಮೂಲ ಆಕೆಯ ಕುಡಿನೋಟದಲ್ಲಿರಬಹುದು, ಮೈಮಾಟದಲ್ಲಿರಬಹುದು,ಬಳುಕುವ ಸೊಂಟದಲ್ಲಿರಬಹುದು,ಕೋಗಿಲೆ ಕಂಠದಲ್ಲಿರಬಹುದು. ಆದರೆ ಅದು ಇರುವುದಂತೂ ಸ್ಪಷ್ಟ !. ಆ ಬಲೆಯೊಳಗೆ ಬಿದ್ದು ಜೀವನ ಪರ್ಯಂತರ ಒದ್ದಾಡುವ ಗಂಡು ಮಿಕಗಳೇ ಇದಕ್ಕೆ ಜೀವಂತ ಸಾಕ್ಷಿ. ( ಆದರೆ ಬಹುತೇಕ ಗಂಡುಗಳಿಗೆ ಬೀಳಲು ಹೆಣ್ಣ ಬಲೆ ಮೋಹಕ ವಾಗಬೇಕಾಗಿಲ್ಲವಾದರೂ,ನಾನು ಮೋಹಕ ಬಲೆ ಎಂದೇ ಕರೆಯುವಲ್ಲಿ ನನಗೆ ಗಂಡು ಮಿಕಗಳ ಬಗ್ಗೆ ಇರುವ ಸಹಾನುಭೂತಿಯೇ ಕಾರಣ ).ಹೆಣ್ಣು ವೈಯಾರದಿಂದ ಕಣ್ಣು ಮಿಟುಕಿಸಿ ಸಣ್ಣನೆಯ ನಗೆಯೊಂದರ ಬಲೆ ಬೀಸಿದರೆ ಸಾಕು ಎಂಥಾ ಸನ್ಯಾಸಿಯೆ ಆಗಿದ್ದರೂ ಸಂಸಾರದ ಆಸೆ ಕಾಣುತ್ತಾನೆ,ಇನ್ನು ಚಿಗುರು ಮೀಸೆಯ ಹುಡುಗರನ್ನಂತೂ ದೇವರೆ ಬಂದರೂ ಕಾಪಾಡಲಾರ. ಹೀಗೆ ಅಬಾಲ ವೃದ್ಧರಾದಿಯಾಗಿ ಎಂತಹ ಗಂಡಸರನ್ನೂ ಬಲೆಯಲ್ಲಿ ಕೆಡವ ಬಲ್ಲ ವಿಶೇಷ ಬಲೆ ಹೊಂದಿರುವ ಹೆಣ್ಣು ಯಾ ಸ್ತ್ರಿ ಅಬಲೆ ( ಬಲೆ ಇಲ್ಲದವಳು) ಅಲ್ಲವೆ ಅಲ್ಲ.
ಈ ಬಲೆಯ ಜಾಲದಿಂದ ಗಡ್ಡ ಬಿಟ್ಟು ಗುಡ್ಡ ಹತ್ತಿದ ವಿಶ್ಯಾಮಿತ್ರನಂತಹ ತಪಸ್ವಿಯೇ ತಪ್ಪಿಸಿಕೊಳ್ಳಲಾಗದೆ ಮನೆ ,ಮಕ್ಕಳೆಂದು ಒದ್ದಾಡಿ ಪಡಬಾರದ ಪಾಡು ಪಟ್ಟಿರುವಾಗ ನಮ್ಮ ನಿಮ್ಮಂತಹ ಸಾಮಾನ್ಯರು ಈ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ?

2. ಇನ್ನು ಬುದ್ಧಿ,ಜಾಣ್ಮೆಯ ವಿಷಯದಲ್ಲಂತೂ ಸ್ತ್ರಿ ಗಂಡಿಗಿಂತ ಯಾವತ್ತೂ ಹೆಚ್ಚಿನ ಬಲವುಳ್ಳವಳು. ಗಂಡು ಬಾಯಲ್ಲಿ ಭಾರಿ ಬಡಾಯಿ ಕೊಚ್ಚಿ ಕೊಳ್ಳುತ್ತಾ ತಿರುಗಾಡುತ್ತಿದ್ದರೆ, ಅದೇ ಹೆಣ್ಣು ಅಂತಹ ಗಂಡುಗಳನ್ನು ಒಂದು ಜಾಣ್ಮೆಯ ಕಿರು ನಗೆಯಲ್ಲೆ ಧರಾಶಾಯಿಯನ್ನಾಗಿಸಿ ತನ್ನ ಬೇಳೆ ಬೇಯಿಸಿ ಕೊಳ್ಳುತ್ತಾಳೆ. ಇದಕ್ಕೆ ಕಾಲೇಜು ಹುಡುಗಿಯರಿಗಿಂತ ಬೇರೆ ಒಳ್ಳೆ ಉದಾಹರಣೆ ಸಿಗಲಾರದು. ಪರ್ಸಲ್ಲಿ ಒಂದು ರೂಪಾಯಿ ಇಲ್ಲದೆಯೂ ಹೊಟ್ಟೆ ಬಿರಿಯುವಷ್ಟು ಮೃಷ್ಟಾನ್ನ ಭೋಜನ ಮಾಡಬಲ್ಲರು ( ಮೇಲೆ ಐಸ್ ಕ್ರೀಮ್ ಬೇರೆ ), ಕ್ಲಾಸಲ್ಲಿ ಒಂದು ಪಿರಿಯಡ್ಡು ಕೂತು ಕೊಳ್ಳದೆಯೂ ನೋಟ್ಸ್ ಕಂಪ್ಲೀಟ್ ಮಾಡಿಕೊಳ್ಳಬಲ್ಲರು, ಪಾಕೆಟ್ ಮನಿಯ ಹೆಸರೇ ಕೇಳದ ಹುಡುಗಿಯರೂ ಇಷ್ಟ ಪಟ್ಟ ಎಲ್ಲಾ ಸಿನೇಮಾ ನೊಡಬಲ್ಲರು,ಇಷ್ಟ ಪಟ್ಟ ಎಲ್ಲಾ ವಸ್ತುಗಳನ್ನೂ ಕೊಳ್ಳಬಲ್ಲರು.( ಈ ಪಟ್ಟಿ ಎಷ್ಟು ಬೆಳೆಯುತ್ತದೆ ಎಂಬುದು ಎಲ್ಲಾ ಗಂಡು/ಹೆಣ್ಣು ಗಳಿಗೂ ಗೊತ್ತಿರುವುದರಿಂದ ಅ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ ). ಆದರೆ ಹೆಣ್ಣಿಗೆ ಇದು ಸಾಧ್ಯವಾದದ್ದು ಒಂದು ಲವ್ಲಿ ನಗೆ ಮತ್ತು ಸಣ್ಣ ಕುಡಿ ನೋಟ ದಿಂದ ಎಂದಾಗ ಆಕೆಯ ಜಾಣ್ಮೆಯ ಅರಿವಾಗುತ್ತದೆ. ಅಷ್ಟಕ್ಕೂ ಅವಳ ಲವ್ಲಿ ನಗೆ ಹಾಗು ಕುಡಿ ನೋಟಕ್ಕೆ ಬಲಿಯಾದವನು ತನ್ನನು ತಾನೇ ಬಲವಂತ ಎಂದು ನಂಬಿರುವ ಗಂಡು ಎಂಬುದು ಹಗಲಿನಷ್ಟು ಸ್ಪಷ್ಟವಾಗಿರುವಾಗ ಹೆಣ್ಣನ್ನು ಜಾಣ್ಮೆಯಲ್ಲಿ ಬಲವಂತಳು ಎಂದು ನಿರ್ವಿವಾದವಾಗಿ ಹೇಳಬಹುದು.

3. ಇನ್ನು ತಲೆಯ ಒಳಗಿನ ವಿಷಯ ಬಿಟ್ಟು ತಲೆಯ ಹೊರಗಣ ವಿಷಯಕ್ಕೆ ಬಂದರೂ ಅಲ್ಲಿಯೂ ಹೆಣ್ಣೇ ಸಬಲಳಾಗಿ ಗೆಲ್ಲುತ್ತಾಳೆ. ಹೆಣ್ಣಿನ ತಲೆ ಕೂದಲ ಮುಂದೆ ಗಂಡು ತಲೆ ಕೆಳಗಾಗಿಸಿ ನಿಲ್ಲುವುದಲ್ಲದೆ ಬೇರೇನು ಮಾಡಲು ಸಾಧ್ಯ ? ಹೆಣ್ಣು ಉದ್ದ ಉದ್ದ ಕೂದಲನ್ನು ನೇವರಿಕೊಳ್ಳುತ್ತಾ, ನೀಲವೇಣಿ,ನಾಗವೇಣಿ ಎಂದು ಬೀಗುತಿದ್ದರೆ, ಬಡಪಾಯಿ ಗಂಡು ತನ್ನ ಬೋಳು ತಲೆಯನ್ನು ನೇವರಿಸುತ್ತಾ ದೇವರ ಪಕ್ಷಪಾತಕ್ಕೆ ಮರುಗುತ್ತಿದ್ದಾನೆ. ಬಹುಶಃ ದೇವರು ಕೂಡ ಹೆಣ್ಣಿನ ಬಲಕ್ಕೆ ಅಂಜಿ ಒಂದೇ ಒಂದು ಹೆಣ್ಣಿಗೂ ಬೋಳು ತಲೆ ನೀಡದೆ ಸಾಲು ಸಾಲಲ್ಲಿ ಗಂಡಸರನ್ನು ಮಾತ್ರ ಬಕ್ಕ ತಲೆಯವರನ್ನಾಗಿಸಿ, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಕ್ಷಿ ನುಡಿದಿದ್ದಾನೆ.
"ಎಲ್ಲಿ ಹೆಣ್ಣು ಪೂಜಿಸಲ್ಪಡುವಳೋ ಅಲ್ಲಿ ದೇವರು ನೆಲೆಸಿರುತ್ತಾನೆ" ಎಂದು ಹೇಳಲ್ಪಟ್ಟಿರುವುದು ಹೆಣ್ಣಿನ ಬಲಕ್ಕೆ ದೇವರೂ ಅಂಜುತ್ತಾನೆ ಎಂಬುದರ ಕಾವ್ಯ ರೂಪವಲ್ಲದೆ ಬೇರೇನಲ್ಲ.

4. ಇನ್ನು ಆತ್ಮ ಬಲದ ವಿಷಯಕ್ಕೆ ಬಂದರಂತೂ ಹೆಣ್ಣಿಗೆ ಸಾಟಿಯೆ ಇಲ್ಲ.ಆತ್ಮ ಬಲದಲ್ಲಿ ಹೆಣ್ಣು ಮಹಾ ಗಟ್ಟಿಗಳು.ಗಂಡು ಬೆಂಕಿಯನ್ನು ಕಂಡರೆ ಮೈಲು ದೂರ ಓಡಿದರೆ, ಅದೇ ಹೆಣ್ಣು ಉರಿಯುವ ಚಿತೆಯಲ್ಲಿ ಯಾವ ಭಯವೂ ಇಲ್ಲದೆ ಹಾರಬಲ್ಲಷ್ಟು ಆತ್ಮ ಬಲವುಳ್ಳವಳು,ಧೈರ್ಯವಂತಳು. ಒಂದರ್ಥದಲ್ಲಿ ಹೇಳುವುದಾದರೆ ಬೆಂಕಿಗೂ ಹೆಣ್ಣಿಗೂ ಹೆಚ್ಚು ವ್ಯತ್ಯಾಸವಿಲ್ಲ. ಗಂಡ ಜೀವಂತ ಇದ್ದಾಗ ಬೆಂಕಿಯಂತೆ ಆತನನ್ನು ಕಾಡಿದ ( ಇಲ್ಲಿ 'ಸುಟ್ಟ' ಎಂಬ ಕ್ರೂರ ಪದ ಬೇಡ) ಹೆಣ್ಣು,ಗಂಡ ಸತ್ತ ಮರುಗಳಿಗೆಯೆ ಅದೇ ಬೆಂಕಿಗೆ ಹಾರುವುದು ದೊಡ್ಡ ವಿಷಯವಲ್ಲ ಎಂದು ಹೇಳುವ 'ಪತ್ನೀ ಪೀಡಿತರ ಸಂಘದ' ಮಾತು ಅವರ ಹತಾಶೆಯ ಭಾವವಾಗಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಆದರೆ ಗಂಡು ಸತ್ತ ಹೆಂಡತಿಯ ಚಿತೆಯೇರುವಷ್ಟು ಧೈರ್ಯವುಳ್ಳವನೇ ?. ಹೆಂಡತಿಯ ಚಿತೆಯೇರಿದ ಒಬ್ಬನೆ ಒಬ್ಬ ಗಂಡು(?) ಇದ್ದಾನೆಯೆ ?.
ಹಾಗಾಗಿ ಇಂತಹ ಆತ್ಮ ಬಲವುಳ್ಳ ಹೆಣ್ಣೂ ಅಬಲೆ ಹೇಗಾದಾಳು ?
ಆಧಾರ :ಸೀತೆ,ದಾಕ್ಷಾಯಿಣಿ,ಮಾದ್ರಿ ಮತ್ತು ಇನ್ನಿತರ ಇತಿಹಾಸದ ಸಹಸ್ರ ಸಹಸ್ರ ಧೀಮಂತ ಭಾರತ ರತ್ನೆಯರು.

5. ಹೆಣ್ಣನ್ನು ಅಬಲೆ ಎಂದು ಕರೆದ ಮಂದಿ ಅದಕ್ಕೆ ಕೊಡುವ ಕಾರಣ ಹೆಣ್ಣು ಕೋಮಲೆ,ಮರದ ಆಶ್ರಯವಿಲ್ಲದೆ ಬೆಳೆಯಲಾರದ ಬಳ್ಳಿ ಇತ್ಯಾದಿ ಇತ್ಯಾದಿ ಕಾವ್ಯಾತ್ಮಕ ಹೇಳಿಕೆ. ಆದರೆ ಕೋಮಲತೆ ಎಂಬುದು ಹೆಣ್ಣು ಬೀಸುವ ಮೋಹಕ ಬಲೆಯ ರಹಸ್ಯ ನೂಲುಗಳು ಎಂಬುದು ಪಾಪ ಬಡಪಾಯಿ ಗಂಡು ಕವಿಗಳಿಗೆ ಗೊತ್ತಿಲ್ಲ !. ಕೋಮಲ ಮುಖ ಭಾವದಿಂದ,ಕೋಮಲ ಮಾತುಗಳಿಂದ ಗಂಡನನ್ನು ಮೂರ್ಖನನ್ನಾಗಿಸಿ ತಿಂಗಳ ಪೂರ್ತಿ ಸಂಬಳವನ್ನು ಲಪಟಾಯಿಸುವ ಹೋಮ್ ವೈಫ್ ಮಾಯಂಗನೆಯರೇ ಇದಕ್ಕೆ ಜೀವಂತ ಸಾಕ್ಷಿ. ಅಷ್ಟಕ್ಕೂ ಜಯಲಲಿತಾ,ಮಾಯಾವತಿ, ಮಮತಾ ಬ್ಯಾನರ್ಜಿ ಯಂತಹ ನಿತ್ಯ ಕುಮಾರಿಯರನ್ನು(?) ಕಂಡ ದೇಶದಲ್ಲಿ, ಇನ್ನೂ ಸಹ ಹೆಣ್ಣನ್ನು ಕೋಮಲೆ ಎಂದು ಕರೆದರೆ ಅದನ್ನು ಗಂಡಸರ ದೌರ್ಬಲ್ಯ ಎನ್ನದೆ ಬೇರೆ ವಿಧಿ ಇಲ್ಲ.

6. ಬಲವಿರುವ ಕಡೆಯೆ ಜನರಿರುತ್ತಾರೆ ಎಂಬ ಮಾತಿನಂತೆ, ಹೆಣ್ಣು ವೈಯಾರದಿಂದ ಬೀದಿಯಲ್ಲಿ ನಡೆಯುವಾಗ ಅವಳ ಎಡ ,ಬಲ, ಹಿಂದೆ ,ಮುಂದೆ ಜೆಡ್(z) ರಕ್ಷಣಾ ವ್ಯೊಹ ಕಂಡಾಗಲೆ ಸಮಾಜದಲ್ಲಿ ಅವಳ ಬಲ ಏನು ಅರ್ಥ ಮಾಡಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ಅದೇ ವೈಯಾರದ ಹೆಣ್ಣು ಗಂಡಿಗೆ ಯಾವ ರೀತಿಯಲ್ಲಿ ಹಿಂಸೆ ನೀಡಿದರೂ ( ಕಣ್ಣು ಸನ್ನೆ, ಹುಬ್ಬಿನಾಟ, ಬೆರಳ ಸನ್ನೆ... ಇತ್ಯಾದಿ ಇತ್ಯಾದಿ ) ತಪ್ಪೆಲ್ಲಾ ಗಂಡಸಿನದ್ದೇ, ಅದೇ ಹೆಣ್ಣನ್ನು ಸ್ವಲ್ಪ ಚುಡಾಯಿಸಿ ನೋಡಿ ಇಡೀ ಲೋಕವೆ ಅವಳ ನೆರವಿಗೆ ಧಾವಿಸುತ್ತದೆ. ತಪ್ಪೆಲ್ಲಾ ಅವಳದ್ದೇ ಆಗಿದ್ದರೂ ಒದೆ ಮಾತ್ರ ನಿಮಗೆ. ಜಗತ್ತು ಯಾವತ್ತೂ ಬಲಿಷ್ಟರ ಸೊತ್ತು ಮತ್ತು ಅಂತಹ ಬಲಿಷ್ಟತೆ ಇರುವ ಹೆಣ್ಣು ಅಬಲೆ ಹೇಗಾದಾಳು ?
ಹೆಣ್ಣಿನ ಬಲಕ್ಕೆ ಬಾಗಿಯೆ ಬಸ್ಸಲ್ಲಿ ನಾಲ್ಕು ಸೀಟು ಮೀಸಲು,( ಗಂಡು ತಪ್ಪಿಯೂ ಆ ಸೀಟಲ್ಲಿ ಕೂರುವಂತಿಲ್ಲ ಹಾಗಂತ ಹೆಣ್ಣು ಮೀಸಲಿರಿಸಲ್ಪಟ್ಟ ನಾಲ್ಕು ಸೀಟು ಹಾಗೆ ಖಾಲಿಯಿದ್ದರೂ ಬೇರೆ ಕಡೆ ಕೂರಬಹುದು ಮತ್ತು ಗಂಡು ಅದನ್ನು ಆಕ್ಷೇಪಿಸುವಂತಿಲ್ಲ !. ಅಷ್ಟಕ್ಕೂ ಪಾಪ ಬಡಪಾಯಿ ಗಂಡಿಗೆ ಮೀಸಲು ಸೀಟೆ ಇಲ್ಲ,ಹೆಣ್ಣು ಬಿಟ್ಟು ಕೊಟ್ಟರಷ್ಟೆ ಕೂರುವ ಭಾಗ್ಯ ), ಕೆಲಸಕ್ಕೆ ಕರೆವಾಗಲೂ ಲೇಡೀಸ್ ಫಸ್ಟ್, ಟ್ಯಾಕ್ಸ್ ತುಂಬುವಾಗಲೂ ರಿಯಾಯಿತಿ...ಅಬ್ಬಾ ಒಂದೇ,ಎರಡೇ..ಇವೆಲ್ಲಾ ಬಲವಿದ್ದ ಫಲವಾಗಿ ಹೆಣ್ಣಿಗೆ ಒಲಿದ ಭಾಗ್ಯಗಳು.

7. ಇನ್ನು ವ್ಯಾಪಾರ, ವ್ಯವಹಾರದಲ್ಲೂ ಹೆಣ್ಣು ಮಹಾ ಗಟ್ಟಿಗಳು. ಬಟ್ಟೆ ಮಳಿಗೆ, ತರಕಾರಿ ಅಂಗಡಿ,ಆಭರಣದಂಗಡಿ ಎಲ್ಲೇ ಹೋಗಲಿ ಗಂಡಸರನ್ನು ಕೇಳುವವರಿಲ್ಲ. ಅದೇ ಹೆಣ್ಣು ಹೋದರೆ ಅಂಗಡಿಯವರೆಲ್ಲಾ ಅವಳ ಹಿಂದೆಯೆ. ರಾಜ ಮರ್ಯಾದೆ ಬೇರೆ. ಅಷ್ಟಾದರೂ ಬಟ್ಟೆ ಅಂಗಡಿಯಲ್ಲಿ ರಾಶಿ,ರಾಶಿ ಸೀರೆ ಆರಿಸಿಯೂ ಒಂದನ್ನೂ ಖರೀದಿಸದೆ ಧೈರ್ಯವಾಗಿ ಹೊರ ಬರಬಲ್ಲಳು ಹೆಣ್ಣು. ಈ ರೀತಿ ಎಲ್ಲವನ್ನೂ ಆರಿಸಿ ಒಂದನ್ನೂ ಖರೀದಿಸದೆ ಬರುವ ಧೈರ್ಯ ಯಾವ ಗಂಡಿಗಿದೆ ?. ಹಾಗೊಂದು ವೇಳೆ ಮೊಂಡು ಧೈರ್ಯಮಾಡಿ ನೀವು ಏನನ್ನೂ ಖರೀದಿಸದೆ ಹೊರಬರಲು ಯತ್ನಿಸಿದಿರೋ ಮುಗಿದೇ ಹೋಯಿತು ನಿಮ್ಮ ಕತೆ, ಅಲ್ಲಿರುವ ಸೊಳ್ಳೆ, ಜಿರಳೆಗಳೂ ನಿಮ್ಮನ್ನು ದುರುಗುಟ್ಟಿ ನೋಡುವವುಗಳೆ !. ಅದೇ ಹೆಣ್ಣು ಏನೂ ಆಗಿಲ್ಲವೆಂಬಂತೆ ಅಷ್ಟೂ ಸೀರೆಯ ರಾಶಿಯನ್ನು ಪಕ್ಕಕೆ ಸರಿಸಿ ರಾಜ ಗಾಂಭಿರ್ಯದಲ್ಲಿ ಹೊರ ನಡೆಯುತ್ತಾಳೆ.
ವರ್ತಕ ಕೇಳಿದಷ್ಟು ದುಡ್ಡು ಸುರಿದು ಸರಕು ಖರೀದಿಸುವ ಹುಂಬ,ದುರ್ಬಲ ಗಂಡೆಲ್ಲಿ, ಚೌಕಾಶಿ ಮಾಡದೆ ಏನನ್ನೂ ಖರೀದಿಸದ ಸಬಲೆ ಹೆಣ್ಣೆಲ್ಲಿ ?

8. ಇನ್ನು ಮದುವೆಯಾದ ಹೆಣ್ಣ ಬಗ್ಗೆಯಂತೂ ಕೇಳಲೇ ಬೇಡಿ. ಮದುವೆಯಾದ ಬಳಿಕ ಬರುವ ಬಲವೇ ಬೇರೆ. ಅ ಬಲದ ಮುಂದೆ ಗಂಡನೆಂಬ ಗಂಡಸು ಎಷ್ಟು ದುರ್ಬಲನಾಗುತ್ತಾನೆಂದರೆ,ಆತ ಉಸಿರಾಡುವುದಕ್ಕೂ ಹೆಂಡತಿಯ ಸೂಚನೆಗೆ ಕಾಯವಷ್ಟರ ಮಟ್ಟಿಗೆ ಕುಸಿದು ಹೋಗುತ್ತಾನೆ. ಇದನ್ನು ಮದುವೆಯಾದ ಗಂಡಸರು ಎಷ್ಟೇ ಅಲ್ಲಗಳೆದರೂ, ರಹಸ್ಯವಾಗಿಟ್ಟರೂ ಇದೊಂದು ಒಪನ್ ಸೀಕ್ರೆಟ್ !. ಮದುವೆಯಾದ ಹೆಣ್ಣಿನ ವಾಗ್ಬಲ,ತೋಳ್ಬಲ ಎಷ್ಟು ಭೀಕರವಾಗಿರುತ್ತೆದೆಯೆಂದರೆ ಉಪ್ಪು ಸಕ್ಕರೆಗೆ ವ್ಯತ್ಯಾಸವನ್ನೇ ತಿಳಿಯದವ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿಯುತ್ತಾನೆ !,ಮಧ್ಯ ರಾತ್ರಿವರೆಗೂ ಮನೆಗೇ ಹೋಗದವ ಹಕ್ಕಿಗಳು ಗೂಡು ಸೇರುವ ಕಾಲಕ್ಕೂ ಮೊದಲೇ ಮನೆ ಸೇರಿರುತ್ತಾನೆ. ತನಗಿಷ್ಟವಾದ ಯಾವ ಸಿನೇಮಾವನ್ನೂ ನೋಡುವುದಿಲ್ಲ ಮತ್ತು ಹೆಂಡತಿಗಿಷ್ಟವಾದ ( 'ತನಗಿಷ್ಟವಾಗದ' ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ ? ) ಯಾವ ಸಿನೇಮಾವನ್ನೂ ನೋಡದೆ ಬಿಡುವುದಿಲ್ಲ (ಬಿಡುವಂತಿಲ್ಲ),ಪಾರ್ಟಿ,ಕೂಟ,ಪಬ್ಬು,ಕ್ಲಬ್ಬು ಅವಳಿಲ್ಲದೆ ಯಾವುದೂ ಇಲ್ಲ.
ಮದುವೆಯಾದ ಹೆಣ್ಣಿನ ಬಲದ ಬಗ್ಗೆ ಇಂತಹ ಸಾವಿರಾರು ಉದಾಹರಣೆಗಳನ್ನು ಕೊಡಬಹುದಾದರೂ ಗಂಡಿನ ಬಗ್ಗೆ ಸ್ವಜಾತಿ ಪಕ್ಷಪಾತಕ್ಕೆ ಒಳಗಾಗಿ ಮತ್ತು ಮದುವೆಯ ಬಗ್ಗೆ ನೂರಾರು ಹಗಲು ಕನಸು ಕಾಣುತ್ತಿರುವ ಯುವ ಮಿತ್ರರ ಆಶಾಭಂಗ ಮಾಡಲು ಇಷ್ಟಪಡುವುದಿಲ್ಲ.

ಹೀಗೆ ಅನೇಕಾನೇಕ ಪುರಾವೆಗಳ ಸಹಿತ ಹೆಣ್ಣು ಅಬಲೆಯಲ್ಲವೆ ಅಲ್ಲ ಎಂದು ಸಾದೋಹರಣವಾಗಿ ಮತ್ತು ನಿರ್ವಿವಾದವಾಗಿ ನಿರೂಪಿಸಬಹುದು. ಇನ್ನಾದರೂ ನಮ್ಮ ಪ್ರಜ್ಞಾವಂತ ಮಹಿಳಾ ಮಣಿಗಳು ಸ್ತ್ರಿ ಶೋಷಣೆ, ಹಕ್ಕು,ಕಾಯ್ದೆ,ಮೀಸಲಾತಿ ಎಂದೆಲ್ಲಾ ಹೋರಾಟ ಮಾಡುವುದನ್ನು ನಿಲ್ಲಿಸಿ ಬಡಪಾಯಿ ಗಂಡಸಿಗೆ ಬದುಕಲು ಬಿಡ ಬೇಕೆಂಬುದೇ ನನ್ನ ಸಂಶೋಧನೆಯ ಹಿಂದಿರುವ ಸದಾಶಯ.

Tuesday, April 15, 2008

ಸೆರೆ-ಸುರೆ

ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ
ಮನೆಯಲೇ ನಾನು ಸೆರೆಯಾಳು
ಬೇಸಿಗೆ ರಜೆಗೆ ತವರಿಗೆ ಹೊರಟರೆ
ತಿಂಗಳು ಪೂರ್ತಿ ಸುರೆಯಾಳು ||

Thursday, April 10, 2008

ನಾನಾಗಬೇಕೊಮ್ಮೆ ಮಂತ್ರಿ...

ನಾನಾಗಬೇಕೊಮ್ಮೆ ಮಂತ್ರಿ...
-------------------

ಬೀಸಿದೆ ಮತ್ತೊಮ್ಮೆ
ಚುನಾವಣೆಯ ಗಾಳಿ
ಗರಿಗೆದರಿದೆ ಕುರ್ಚಿಯ ಕನಸು
ಹೊಸ ರೂಪವ ತಾಳಿ ||

ಜನರಿದ್ದೆಡೆ ಸಾಗುವೆನು
ಮುಖವಾಡವ ಧರಿಸಿ
ಮತಯಾಚನೆ ಮಾಡುವೆನು
ಹುಸಿ ನಗೆಯ ಸೂಸಿ ||

ಮತದಾರರ ಮರೆವೆಂಬುದು
ರಾಜಕಾರಣಿಕೆ ವರವು
ಮನವೊಲಿಕೆಗೆ ಬಳಸುವೆ
ಆಶ್ವಾಸನೆಯ ನೆರವು ||

ಮೌಲ್ಯಗಳು,ತತ್ವಗಳು
ನನಗ್ಯಾಕೆ ಬೇಕು
ಹಣ ಬಲ, ಜಾತಿ ಬಲ
ಗೆಲ್ಲುವುದಕ್ಕೆ ಸಾಕು ||

ಬೆನ್ನ ಹಿಂದಿದ್ದರೇನಾಯ್ತು
ಹಗರಣದ ಕರಿ ನೆರಳು
ಪಕ್ಷಾಂತರದ ಪರಕಾಯವಿದೆ
ಪಡೆಯಲು ಹೊಸ ಬಾಳು ||

ಜನರೇನೇ ಬೈದರೂ
ಇದ್ದು ಬಿಡುವೆನು ಸುಮ್ಮನೆ
ಟೊಮೆಟೊ,ಮೊಟ್ಟೆ ಎಸೆದರೂ
ತೋರುವೆನು ಸಹನೆ ||

ಚುನಾವಣೆ ಮುಗಿಯೊವರೆಗೆ
ನನ್ನೊಲವು ಮತದಾರರತ್ತ
ಸಮಸ್ಯೆಗಳೇನೇ ಮುಂದ್ದಿಟ್ಟರೂ
ಪರಿಹಾರದ ಅಭಯ ಹಸ್ತ ||

ಜನ ಕರೆಯಲಿ ಬಿಡಿ ನನ್ನನ್ನು
ಭ್ರಷ್ಟಚಾರಿ,ವಂಚಕ,ಕಂತ್ರಿ
ನನಗಿರುವುದೊಂದೇ ಆಸೆ
ನಾನಾಗಬೇಕೊಮ್ಮೆ ಮಂತ್ರಿ ||

Friday, March 7, 2008

ಕಾರಣ..!?!

ಆಕೆಯನ್ನು ಮದುವೆಯಾಗಲು
ಆತ ಕೇಳುತ್ತಿದ್ದಾನಂತೆ
ಭಾರಿ ತೆರಿಗೆ..
ಯಾಕೆಂದರೆ...?
ಮದುವೆಗೆ ಮುಂಚೆಯೆ
ತಯಾರಾಗಿದೆ ಹೆರಿಗೆ..!!

ರಹಸ್ಯ...

ಹೆಂಡತಿ ಹೆತ್ತು
ತಿಂಗಳು ಮೂರಾದರೂ
ಗಡ್ಡ ಬೋಳಿಸಿಲ್ಲ ಯಾಕೆ..!
ಈ ನಡುವೆ ಗರ್ಭಿಣಿ
ನೆರಮನೆಯಾಕೆ...

ಕೊಡುಗೆ...

ಹೇಳುತ್ತಿದ್ದರು ತುಂಬಿದ ಸಭೆಯಲ್ಲಿ
ಶಾಲಾ ಕಟ್ಟಡದ ಅಭಿವೃದ್ದಿಗೆ
ಸಹಕರಿಸಿ ನಿಮ್ಮ ಕೈಲಾದ ಮಟ್ಟಿಗೆ...
ದೂರದಿಂದ ಕೈ ಬೀಸಿ ಎಸೆಯುತ್ತಾ
ಯಾರೋ ಕೂಗಿದರು ಎತ್ತರದ ದನಿಯಲ್ಲಿ
ಇದೋ ಪಡೆಯಿರಿ ನನ್ನದೆರಡು ಇಟ್ಟಿಗೆ ...||

ಗೆದ್ದು ಸೋತವನು..

ಅದೆಷ್ಟು ಗೌರವವಿತ್ತು ನಿನ್ನ ಮೇಲೆ
ಬಾಲಕನಾಗಿದ್ದರೂ ಒಂದಿಷ್ಟೂ ಭಯಪಡದೆ
ತಾಟಕಿಯಾದಿಯಾಗಿ ರಕ್ಕಸರ ಹುಟ್ಟಡಗಿಸಿದಾಗ...
ಶಾಪಗ್ರಸ್ತ ಮುನಿಸತಿಗೆ ಜೀವ ತಂದಾಗ...
ಬಿಲ್ಲು ಮುರಿದು ಮನದೊಡತಿಯ ಗೆದ್ದು ತಂದಾಗ...
ಪಿತೃವಾಕ್ಯ ಪರಿಪಾಲಕನಾಗಿ ಅಡವಿಗಭಿಮುಖನಾದಾಗ...||
ನಿಜವಾಗಿಯೂ ದೇವತ್ವದ ದರ್ಶನವಾಯಿತು
ಭೋಗ ಭಾಗ್ಯಗಳ ತೊರೆದು, ಬರಿಗಾಲಲ್ಲೇ ನಡೆದು
ಪರ್ಣ ಕುಟೀರದೊಳಗೂ ಪರಮಾನಂದದೊಳಿದ್ದಾಗಾ...
ವಿರಹದುರಿಯಲಿ ಬೆಂದು,ನೊಂದು,ಪ್ರಿಯ ಮಡದಿಗಾಗಿ
ಪ್ರೇಮ ಭೈರಾಗಿಯಾಗಿ ಪರಿ ಪರಿಯಲಿ ಪರಿತಪಿಸಿದಾಗ...
ಕಪಿ ಸೈನ್ಯ, ಸೇತು ಬಂಧನ, ಘೋರ ಕದನ ದುಷ್ಟ ಮರ್ದನ
ಇನ್ನೇನು ನೀನು ದೇವನಹುದಹುದೆಂದು ಭಕ್ತಿ ಪರವಶನಾಗಿ
ಭಾವೋನ್ಮಾದದಿ ಹುಚ್ಚೆದ್ದು ಕುಣಿಯ ಬೇಕೆಂಬಾಗ...
ಎಂಥಹಾ ಭಾವಘಾತ, ಪತಿತೆಯಾಗಿ ಕಂಡಳೆ ಪುನಿತೆ ?
ರಾಮನ ಬಾಯಿಂದ ಅಗ್ನಿಪರೀಕ್ಷೆಯ ಮಾತೆ ?
ಅಗ್ನಿಯುರಿಗಂಜದೆ ಉರಿ ಮಾತಿಗತ್ತಳು ಸೀತೆ .

ದೇವತ್ವವೆಲ್ಲಿ ರಾಮ, ಬರಿ ಮನುಷ್ಯತ್ವವೂ ಇರದ
ಎಲ್ಲರಂತೆ ಸಾಮಾನ್ಯ ಗಂಡಾಗಿ ನಿಂತೆ !!
ಸೀತೆ ಗೆದ್ದಳು, ಪುರುಷ ಸಮಾಜ ಗೆದ್ದಿತು
ಆದರೆ ರಾಮ ನೀನು... ಗೆದ್ದು ಸೋತೆ ||

Wednesday, March 5, 2008

ಭ್ರಮೆಯ ನೆಚ್ಚಿ...

ಹಾಡಿದೆ, ಬಡಬಡಿಸಿದೆ ಬದುಕಿನುದ್ದಕ್ಕೂ
ಬವಣೆಗಳ ಒಂದಿಷ್ಟು ಮರೆಯಲೆಂದು
ಬಡಾಯಿಯ ಪಟ್ಟ ದಕ್ಕಿತೇ ವಿನಹಃ
ಬೆಲೆಯಿಲ್ಲ ಭಾವನೆಗೆ ಕಾಸಿನೊಂದು ||

ಸ್ವಾಗತಿಸಿದೆ,ಸೇವಿಸಿದೆ ಮನೆಗೆ ಬಂದವರ
ಅತಿಥಿ ದೇವರುಗಳೆಂದು ಮಣೆಯಕೊಟ್ಟು
ತಿಂದರು,ತೇಗಿದರು,ಊರೆಲ್ಲಾ ಊದಿದರು
ಮನೆಯ ಕುಂದು ಕೊರತೆಯನೆಲ್ಲ ಲೆಕ್ಕವಿಟ್ಟು ||

ಅಂತರಂಗವ ತೆರೆದಿಟ್ಟೆ ಒಂದಿಷ್ಟೂ ಮುಚ್ಚಿಡದೆ
ಬಳಗದೊಳಿದ್ದವರೆಲ್ಲಾ ನನ್ನವರೆಂದು
ಕಿವಿಕೂಟ್ಟು ಕೇಳಿದರು, ಕಥೆ ಕಟ್ಟಿ ಹಾಡಿದರು
ನನ್ನ ಜೀವನವೊಂದು ನಗೆಗಿರುವ ಪಾತ್ರವೆಂದು ||

ಕುಣಿದೆ ಕುಪ್ಪಳಿಸಿದೆ ನಗುತಿರಲು ಜಗವೆಲ್ಲ
ನಾಳೆಗಳೆಲ್ಲಾ ನವೋಲ್ಲಾಸದ ದಿನಗಳೆಂದು
ನಗೆಯ ಕೇಕೆಗಳಲ್ಲಿ ನನ್ನ ದನಿ ಕೇಳದೆ
ಅಣಕಿಸಿತು ಒಳದನಿ ಮೂರ್ಖ ನೀನೆಂದು ||

ಸಾಗಿದೆ ಪಯಣ ಮುಖಗಳಿಲ್ಲದ ಮನುಷ್ಯರೊಂದಿಗೆ
ಎಲ್ಲರು ಮನ್ಮಥರೆಂಬ ಭ್ರಮೆಯ ನೆಚ್ಚಿ
ನಂಬಿ ಬಿಟ್ಟಿದೆ ಮನಸು, ಭೂಮಿ ಬಾನದೆಲ್ಲೊ
ಒಂದಾಗಿದೆ ಎಂದು ಕಣ್ಣು ಮುಚ್ಚಿ ||

Tuesday, March 4, 2008

ಅಂತರ್ಮುಖಿಯಾಗು...

ಅಂತರ್ಮುಖಿಯಾಗು ಮನವೆ
ಜಗದ ಮೇಲಾಟಗಳ ಸದ್ದಡಗೊವರೆಗೆ
ಮಥಿಸು ಮನದ ಕಡಲನ್ನು
ಶಾಂತಿ ಅಮ್ರತಧಾರೆ ಉದಿಸುವಲ್ಲಿವರೆಗೆ ||

ನಿನ್ನೊಳಗೂ ಯುದ್ಧ,ಜಗದೊಳಗೂ ಯುದ್ಧ
ಕಿವುಡಾಗು ಕಾಳಗದ ಕ್ರೂರ ಕರೆಗೆ
ಹುಡುಕು ಶಾಂತಿ ಸೂತ್ರಗಳನ್ನು,ಮೌನವಾಗಲು
ಮನದ ಹೊಯ್ದಾಟವೊಂದು ಘಳಿಗೆ ||

ಅತ್ರಪ್ತ ಆತ್ಮ ಹೊರಗೆಲ್ಲೊ ಸುತ್ತುತ್ತಿದೆ
ಸತ್ತಿರಲು ಮೌಲ್ಯಗಳು ಕಡು ಲೋಭದುರಿಗೆ
ಕೈಗೂಡದಾಸೆಗಳು ಉಗ್ರ ಸುಳಿಯಾಗದಂತೆ
ಬಂಧಿಸಿಡು ಆತ್ಮವನು ಭಾವಕಡಲಾಳದೊಳಗೆ ||

ಮುಳುಗೇಳು ಸಹಿಷ್ಣುತೆಯ ಸಲಿಲದಲಿ
ದ್ವೇಷಾಸೂಯೆಗಳ ಒಡಲಾಗ್ನಿ ತಣಿವವರೆಗೆ
ಯಾತ್ರೆ ಮಾಡಲಿ ಮನಸು ಜ್ಞಾನ ಕ್ಷೇತ್ರಗಳತ್ತ
ವೈಚಾರಿಕತೆಯು ಪುಣ್ಯ ತುಂಬಿ ತುಳುಕಾಡೊವರೆಗೆ ||

ಕಣ್ಣಿರದ,ಕಿವಿಯಿರದ,ಮಾತಿರದ ಮುನಿಯಾಗು
ಅಂತರಂಗದಿ ದಿವ್ಯ ಚೇತನ ಆವಿರ್ಭವಿಸೊವರೆಗೆ
ಜಗದ ಕೋಲಾಹಲಕೆ ಮಣಿಯದ ತಾಪಸಿಯಾಗು
ನಿನ್ನೊಳಗೆ ವಿಶ್ವಮಾನವತ್ವದ ಸಿದ್ಧಿ ಸಿದ್ಧಿಸೊವರೆಗೆ ||